ಪಾವಟೆ, ಡಿ ಸಿ
1899-1979. ವಿದ್ವಾಂಸ, ಶಿಕ್ಷಣ ತಜ್ಞ, ದಕ್ಷ ಆಡಳಿತಗಾರ, ಮುತ್ಸದ್ದಿ. ಇವರ ಪೂರ್ಣ ಹೆಸರು ದಾದಾ ಸಾಬ್ ಚಿಂತಪ್ಪ ಪಾವಟೆ. ಹುಟ್ಟಿದ್ದು ಬೆಳಗಾಂವಿ ಜಿಲ್ಲೆಯ ಮಮದಾಪುರದಲ್ಲಿ. ಇವರ ಮಾಧ್ಯಮಿಕ ಶಿಕ್ಷಣ ಗೋಕಾಕ ಮತ್ತು ಕೊಲ್ಲಾಪುರಗಳಲ್ಲಿ ನಡೆಯಿತು. 1919 ರಲ್ಲಿವರು ಧಾರವಾಡದ ಕರ್ನಾಟಕ ಕಾಲೇಜು ಸೇರಿ 1923 ರಲ್ಲಿ ಗಣಿತ ಶಾಸ್ತ್ರದಲ್ಲಿ ಪ್ರಥಮ ದರ್ಜೆ ಆನರ್ಸ್ ಪದವೀಧರರಾದರು. 

1924 ರಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಸಿಡ್ನೀ ಸಸಿಕ್ಸ್ ಕಾಲೇಜು ಸೇರಿ ಗಣಿತ ಶಾಸ್ತ್ರದ ಟ್ರೈಪಾಸ್ ಭಾಗ 1 ಹಾಗೂ 2 ರಲ್ಲಿ ಪ್ರಥಮ ಶ್ರೇಣಿ ಗಳಿಸಿದರು. 1927 ರಲ್ಲಿ ರ್ಯಾಂಗ್ಲರ್ ಆಗಿ ಆ ಕಾಲೇಜಿನ ಸಂಶೋಧನ ವಿದ್ಯಾರ್ಥಿ ವೇತನವನ್ನು ಪಡೆದರು. 1928 ರಲ್ಲಿ ಭಾರತಕ್ಕೆ ಬಂದು ಎರಡು ವರ್ಷಗಳ ಕಾಲ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. 1930 ರಲ್ಲಿ ಮುಂಬಯಿ ವಿದ್ಯಾ ಇಲಾಖೆ ಸೇರಿ ಶಿಕ್ಷಣ ಖಾತೆಯ ಹಲವು ಸ್ಥಾನಗಳಲ್ಲಿ ಕೆಲಸ ಮಾಡಿ 1947 ರಲ್ಲಿ ಇಲಾಖೆಯ ನಿರ್ದೇಶಕರಾದರು. ಎಂಟು ವರ್ಷಗಳ ಅಧಿಕಾರದ ಅವಧಿಯಲ್ಲಿ ವಿಸ್ತಾರವಾದ ಮುಂಬಯಿ ಪ್ರಾಂತ್ಯದ ಶಿಕ್ಷಣ ಸುಧಾರಣೆ ಮತ್ತು ಅನೇಕ ಯೋಜನೆಗಳನ್ನೂ ರೂಪಿಸಿ ಕಾರ್ಯರೂಪಕ್ಕೆ ತಂದರು. 

ಸರ್ಕಾರಿ ಸೇವೆಯಿಂದ ನಿವೃತ್ತರಾದ ಅನಂತರ 1954 ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಚುನಾಯಿತರಾದರು. ಶ್ರೇಷ್ಠ ಶೈಕ್ಷಣಿಕ ಹಿನ್ನೆಲೆ, ಶಿಕ್ಷಣ ಕ್ಷೇತ್ರದ ದೀರ್ಘ ಹಾಗೂ ಬಹುಮುಖ ಅನುಭವ-ಇವುಗಳಿಂದಾಗಿ ಹೊಸದಾಗಿ ಸ್ಥಾಪನೆಗೊಂಡ ವಿಶ್ವವಿದ್ಯಾನಿಲಯದಲ್ಲಿ ಹೊಸ ಚೈತನ್ಯವನ್ನು ತುಂಬಿದರು. ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಒಂದೇ ಸಮನೆ ಐದು ಸಲ ಆಯ್ಕೆಯಾದರು. ಹದಿನಾಲ್ಕು ವರ್ಷಗಳ ಇವರ ಆಡಳಿತದ ಅವಧಿಯಲ್ಲಿ 350 ಎಕರೆ ವಿಸ್ತಾರವಾದ ಚೋಟ ಮಹಾಬಲೇಶ್ವರ ಗುಡ್ಡದ ಮೇಲಿನ ಕ್ಯಾಂಪಸ್ಸಿನಲ್ಲಿ ಅನೇಕ ಕಟ್ಟಡಗಳು ತಲೆ ಎತ್ತಿದವು.

ವಿಶ್ವವಿದ್ಯಾಲಯದ ಎಲ್ಲ ಸ್ನಾತಕೋತ್ತರ ವಿಭಾಗಗಳಿಗೆ ವಿವಿಧ ವಿಷಯಗಳಲ್ಲಿ ಸಮರ್ಥರಾದ ವಿದ್ವಾನ್ ಮಾನ್ಯರನ್ನು ಆಯ್ಕೆ ಮಾಡಲಾಯಿತು. ವಿಶ್ವವಿದ್ಯಾಲಯದ ಗ್ರಂಥಭಂಡಾರವನ್ನು ಆಧುನಿಕ ರೀತಿಯಲ್ಲಿ ವ್ಯವಸ್ಥೆಗೊಳಿಸಲಾಯಿತು. ಭಾರತದ ಪ್ರಗತಿಪರ ವಿಶ್ವವಿದ್ಯಾಲಯಗಳಲ್ಲಿ ಒಂದೆಂಬ ಖ್ಯಾತಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಪಡೆಯಿತು

ಅಲ್ಲದೆ ಇವರು ಅಂತರ ವಿಶ್ವವಿದ್ಯಾಲಯ ಮಂಡಳಿಯ ಸದಸ್ಯರಾಗಿ ಮತ್ತು ವಿಶ್ವವಿದ್ಯಾಲಯ ಅನುದಾನ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಕೆಲಕಾಲ ಬ್ರಿಟಿಷ್ ಕಾಮನ್‍ವೆಲ್ತ್ ವಿಶ್ವವಿದ್ಯಾಲಯಗಳ ಸಂಘದಲ್ಲಿ ಭಾರತ ವಿಶ್ವವಿದ್ಯಾಲಯಗಳನ್ನು ಪ್ರತಿನಿಧಿಸಿ ಕಾರ್ಯಾಂಗ ಸಮಿತಿಯ ಸದಸ್ಯರೂ ಆಗಿದ್ದರು. ಶೈಕ್ಷಣಿಕ ನಿಯಾಮಕಗಳ ಮೇಲೆ ಯೂರೋಪ್, ಅಮೆರಿಕ, ಏಷ್ಯ, ಆಸ್ಟ್ರೇಲಿಯ, ನ್ಯೂಜಿಲೆಂಡ್ ಮೊದಲಾದ ದೇಶಗಳನ್ನು ಸಂದರ್ಶಿಸಿದರು. ಜಿನೀವಾದಲ್ಲಿ ನಡೆದ 19 ನೆಯ ಅಂತರರಾಷ್ಟ್ರೀಯ ಶೈಕ್ಷಣಿಕ ಸಮ್ಮೇಳನಕ್ಕೆ ಭಾರತೀಯ ನಿಯೋಗದ ನಾಯಕರಾಗಿದ್ದರು. 1955-56 ರ ಅಧಿಕೃತ ಭಾಷಾ ಸಮಿತಿಯ ಸದಸ್ಯರಾಗಿದ್ದರು. ಭಾರತ ಸರ್ಕಾರದ ಕೇಂದ್ರ ಸಲಹಾ ಮಂಡಳಿಯ ಸದಸ್ಯರಾಗಿ ಹಲವು ವರ್ಷ ಸೇವೆ ಸಲ್ಲಿಸಿದರು. 1962 ರ ಗೌಹಾತಿ ವಿಶ್ವವಿದ್ಯಾಲಯ ವಿಚಾರಣ ಸಮಿತಿಯ ಅಧ್ಯಕ್ಷರಾಗಿದ್ದರು. ಇವರ ಸರ್ವತೋಮುಖ ಸೇವೆಯನ್ನು ಗಮನಿಸಿದ ಭಾರತ ಸರ್ಕಾರ 1966 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನಿತ್ತು ಇವರನ್ನು ಗೌರವಿಸಿತು. 1967 ರಲ್ಲಿ ಪಂಜಾಬಿನ ರಾಜ್ಯಪಾಲರನ್ನಾಗಿ ನೇಮಿಸಿತು. 1967-72 ರವರೆಗೆ ಇವರು ಪಂಜಾಬಿನ ರಾಜ್ಯಪಾಲರಾಗಿದ್ದರು.

ಇವರು ಎಲಿಮೆಂಟ್ಸ್ ಆಫ್ ಕ್ಯಾಲ್‍ಕ್ಯೂಲಸ್ ಎಂಬ ಗಣಿತಶಾಸ್ತ್ರಕ್ಕೆ ಸಂಬಂಧಿಸಿದ ಪುಸ್ತಕವನ್ನು ಮೆಮೊರೀಸ್ ಆಫ್ ಎನ್ ಎಜುಕೇಷನಲ್ ಅಡ್ಮಿನಿಸ್ಟ್ರೇಟರ್ ಮತ್ತು ಮೈ ಡೇಸ್ ಆ್ಯಸ್ ಗವರ್ನರ್ ಎಂಬ ಗ್ರಂಥಗಳನ್ನು ಬರೆದಿದ್ದಾರೆ. ಈ ಪುಸ್ತಕಗಳಲ್ಲಿ ಸ್ವಾತಂತ್ರ್ಯಾನಂತರದ ಭಾರತದ ರಾಜಕೀಯ ಮತ್ತು ಶೈಕ್ಷಣಿಕ ವಿಷಯಗಳ ವಿಹಂಗಮ ನೋಟವನ್ನು ಕಾಣಬಹುದು.

ಇವರು ತಮ್ಮ ದೀರ್ಘಾವಧಿಯ ಸೇವೆಯ ಅನಂತರ ನಿವೃತ್ತರಾಗಿ ತಮ್ಮ ಕೊನೆಯ ದಿನಗಳನ್ನು ಬೆಂಗಳೂರಿನಲ್ಲಿ ಕಳೆದರು.
(ಎಸ್.ಎಸ್.ಡಬ್ಲ್ಯೂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ